ಬಟ್ಟೆ ನೇಯ್ಗೆ
ಕೈಮಗ್ಗದಲ್ಲಿ ಬಟ್ಟೆ ತಯಾರಿಸುವ ವಿಧಾನವನ್ನು ಇಲ್ಲಿ ವಿವರಿಸಿದೆ. ಕೈಮಗ್ಗದ ಕೈಗಾರಿಕೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ವೃತ್ತಿ. ಉಪಯೋಗಿಸುವ ಕಚ್ಚಾವಸ್ತುಗಳನ್ನು ಆಧರಿಸಿ ಕೈಮಗ್ಗಗಳನ್ನು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು: ಹತ್ತಿ ಬಟ್ಟೆ ನೇಯುವ ಮಗ್ಗ, ರೇಷ್ಮೆ ಮತ್ತು ಕೃತಕ ರೇಷ್ಮೆ ಬಟ್ಟೆ ನೇಯುವ ಮಗ್ಗ, ಉಣ್ಣೆ ಬಟ್ಟೆ ನೇಯುವ ಮಗ್ಗ, ಇತರ ವಸ್ತುಗಳನ್ನು ಉಪಯೋಗಿಸಿ ನೇಯುವ ಮಗ್ಗ.

ರಚನೆ ಮತ್ತು ಕಾರ್ಯ ಕುಶಲತೆ ಅನುಸಾರ ಕೂಡ ಕೈಮಗ್ಗಗಳನ್ನು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು: ಪ್ರಾಚೀನ ಮಗ್ಗ, ಕುಳಿ ಮಗ್ಗ, ಚೌಕಟ್ಟು ಮಗ್ಗ, ಅರ್ಧ ಸ್ವಯಂಚಾಲಿತ ಮಗ್ಗ.

ಭಾರತದಲ್ಲಿ ಪ್ರಚಲಿತವಾಗಿರುವ ಕೆಲವು ಮಗ್ಗಗಳು ಈ ಮುಂದಿನವು.
ಪ್ರಾಚೀನ ಮಗ್ಗಗಳ ವಿಧಗಳು: ಕಟಿಮಗ್ಗ, ಗಿರಿಜನರ ಮಗ್ಗ, ಹಾಸುಗಂಬಳಿ ಮಗ್ಗ ಉಣ್ಣೆಕಂಬಳಿ ಮಗ್ಗ ಜಮಖಾನೆ ಮಗ್ಗ, ನೇವಳ ಮಗ್ಗ, ಟೇಪ್ ಮಗ್ಗ.

ಕೈಲಾಳಿಯ ಕುಳಿ ಮಗ್ಗಗಳ ವಿಧಗಳು: ಗಡ್ವಾಲ ಮಗ್ಗ ಜಮದಾನ ಮಗ್ಗ, ಬಲರಾಮಪುರಮ್ ಮಗ್ಗ, ವಾರಾಣಸಿ ಮಗ್ಗ, ದೇರಿ ಮಗ್ಗ, ಔರಂಗಾಬಾದ್ ಮಗ್ಗ, ಕಂಚೀವರಮ್ ಮಗ್ಗ.

ಹಾರುವ ಲಾಳಿಯ ಕುಳಿಮಗ್ಗಗಳ ವಿಧಗಳು: ಉಪ್ಪಡ ಮಗ್ಗ, ವೆಂಕಟಗಿರಿ ಮಗ್ಗ, ಸೇಲಮ್ ಮಗ್ಗ, ಮದ್ರಾಸು ಕರವಸ್ತ್ರ ಮಗ್ಗ, ಮೌಮಗ್ಗ, ಸಾದಿಲ ಮಗ್ಗ ನಾಗಪುರ ಮಗ್ಗ.

ಚೌಕಟ್ಟು ಮಗ್ಗಗಳ ವಿಧಗಳು: ಮಲಬಾರ ಮಗ್ಗ, ಟೆರ್ರಿ ಚಲನೆಯಿರುವ ಮಲಬಾರ ಮಗ್ಗ, ಮಧುರೆ ಮಗ್ಗ, ರಾಜಸ್ಥಾನಿ ಮಗ್ಗ, ಶಾಂತಿಪುರ ಮಗ್ಗ, ಶೋಲಾಪುರ ಮಗ್ಗ.

ಅರ್ಧಸ್ವಯಂಚಾಲಿತ ಮಗ್ಗಗಳ ವಿಧಗಳು: ಚಿತ್ತರಂಜನ ಮಗ್ಗ, ವಾರಾಣಸಿ ಮಗ್ಗ, ಮದನಪುರ ಮಗ್ಗ, ಹ್ಯಾಟರ್ ಸ್ಲೇಫೆಡಲ್ ಮಗ್ಗ.

ಹಾರುವ ಲಾಳೀಯ ಸ್ಲೇಯನ್ನು ಇಂಗ್ಲೆಂಡಿನಲ್ಲಿ ಉಪಜ್ಞಿಸುವ ತನಕ (18ನೆಯ ಶತಮಾನ) ಭಾರತದಲ್ಲಿ ಕೈಲಾಳಿಯ ಮಗ್ಗಗಳೇ ಬಳಕೆಯಲ್ಲಿದ್ದುವು. ಇಂದಿಗಾದರೂ ಉತ್ತಮ ವಿನ್ಯಾಸ ವೈಖರಿಗಳಿರುವ ಸೊಗಸಾದ ಕೆಲವು ಬಟ್ಟೆಗಳು ತಯಾರಾಗುವುದು ಕೈಲಾಳಿಯ ಮಗ್ಗದಲ್ಲೇ-ವಾರಾಣಸಿಯ ಚಿತ್ರವಿಚಿತ್ರ ವಿನ್ಯಾಸಗಳು, ಟಂಡಾದ ಜಮದಾನಿ ಮಗ್ಗಗಳು, ಪಟಾಣದ ಪಟೋಲಾ ಸೀರೆಗಳು, ಔರಂಗಾಬಾದಿನ ಹಿಮ್ರೂ ಇತ್ಯಾದಿ.

ಮಗ್ಗಗಳಿರುವ ಮುಖ್ಯ ಸ್ಥಳಗಳು : ಬೆಂಗಳೂರು, ಮೈಸೂರು, ಸೇಲಮ್, ಕಂಚಿ, ಈರೋಡ್, ಇಳಕಲ್, ತಂಜಾವೂರು, ಮಧುರೆ, ಧರ್ಮಾವರಮ್, ಈಚಲಕರಂಜಿ, ಗದಗ, ಪೂನಾ, ಶೋಲಾಪುರ, ಶಹಪೂರ, ಇಂದೂರು, ಬರೋಡ, ಜಯಪುರ, ಚಾಮನಗರ, ಪಾಟಿಯಾಲ, ಮಣಿಪುರ, ಬಿಹಾರ, ಬಂಗಾಲ, ಬನಾರಸ್, ಅಸ್ಸಾಮ್ ಇತ್ಯಾದಿ. ಇವುಗಳ ಪೈಕಿ ಹೆಚ್ಚಿನವು, ಸುಮಾರು ಶೇಕಡಾ 80ರಷ್ಟು ಹಳ್ಳಿಗಳಲ್ಲಿ ಹರಡಿಹೋಗಿವೆ.

ಪ್ರಾಚೀನ ಮಗ್ಗಗಳ ರಚನೆ ಸರಳ ಮತ್ತು ಕಾರ್ಯವಿಧಾನ ಹಳೆಯದು. ಹೀಗಿದ್ದರೂ ಅವುಗಳ ವೈಶಿಷ್ಟ್ಯ ಈತನಕ ಬದಲಾಗದೆ ಉಳಿದಿರುವುದು ಅವುಗಳ ಮೇಲ್ಮೆಗೂ ಉಪಯುಕ್ತತೆಗೂ ಸಾಕ್ಷಿ. ಅವುಗಳಲ್ಲಿ ಹೊಕ್ಕನ್ನು ಕೈಯಲ್ಲಿ ಹಾಸಿನೊಂದಿಗೆ ಕೂಡಿಸಲಾಗುತ್ತದೆ. ಚೌಕಟ್ಟು ಚಿಕ್ಕದು, ಭಾರ ಕಡಿಮೆ ಸುಲಭವಾಗಿ ಸಾಗಿಸಬಹುದು. ಆಧುನಿಕ ಮಗ್ಗಗಳಲ್ಲೂ ಸಾಧ್ಯವಾಗದ ಕೆಲವು ವಸ್ತ್ರವಿನ್ಯಾಸಗಳನ್ನು ಹೆಣೆಯುವುದು ಪ್ರಾಚೀನ ಮಗ್ಗಗಳಿಂದ ಮಾತ್ರ ಸಾಧ್ಯ.

ಪುರಾತನ ಕಟಿ ಮಗ್ಗ ಸಾಮಾನ್ಯವಾಗಿ ಮಣಿಪುರ, ತ್ರಿಪುರಾ ಮತ್ತು ಅಸ್ಸಾಮಿನ ಕೆಲವು ಭಾಗಗಳಲ್ಲಿ ಪ್ರಚಲಿತವಾಗಿದೆ. ಇದರಲ್ಲಿ ವಿವಿಧ ರೀತಿಯ ವಸ್ತ್ರ ವಿನ್ಯಾಸಗಳನ್ನು ಹಣೆಯಲು ತುಂಬ ಅನುಕೂಲ. ಗಾರೋಗಿರಿಜನ ಉಪಯೋಗಿಸುವ ಧಾಕ ಬಂಧಗಳು, ತ್ರಿಪುರಾದ ಸ್ತ್ರೀಯರು ತೊಡುವ ಎದೆ ವಸ್ತ್ರ, ಮಣಿಪುರದ ನಾಗಾ ಮತ್ತು ವೈಷ್ಣವ ಮಹಿಳೆಯರು ಉಡುಪು ಫೆನೆಕ್‍ಸೊಂಟ ಪಟ್ಟಿ ಮತ್ತು ಲೋಂಫೋನ ಉಖ್ರಮ್, ನಾಗಾ ತರುಣಿಯರ ನೃತ್ಯದುಡುಗೆಗಳು ಇವೆಲ್ಲ ಕಟಿ ಮಗ್ಗಗಳಲ್ಲಿ ಹೆಣೆಯಲಾಗುವ ವೈಶಿಷ್ಟ್ಯ. ಇಂಥ ಬಟ್ಟೆಗಳನ್ನು ಬೇರೆ ಯಾವ ತರದ ಮಗ್ಗಗಳಲ್ಲಿಯೂ ನೇಯಲು ಸಾಧ್ಯವಿಲ್ಲ. ಎಂದೇ ಇವು ನಶಿಸದೆ ಹಾಗೆಯೇ ಉಳಿದುಕೊಂಡು ಬಂದಿವೆ.

ಗಿರಿಜನ ಮಗ್ಗ (ಪ್ರಾಚೀನ ಮಗ್ಗಗಳು): ಬಿಹಾರ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಇತರ ಕೆಲವು ರಾಜ್ಯಗಳ ಗುಡ್ಡಗಾಡಿನ ಜನ ಬಳಸುವ ಮಗ್ಗವಿದು. ಹಳೆಯ ಮಗ್ಗದಲ್ಲಿ ಉತ್ತಮ ವಿನ್ಯಾಸವುಳ್ಳ ಹಾಗೂ ಆಕರ್ಷಕ ಬಣ್ಣಗಳಿಂದ ತುಂಬಿದ ಪಟ್ಟಿಯ ವೈವಿಧ್ಯಮಯ ವಸ್ತ್ರಗಳನ್ನು ನೇಯಲಾಗುತ್ತದೆ.

ಬಲರಾಮಪುರದ ಮಗ್ಗ: ಇದರಲ್ಲಿ ಉಪಯೋಗಿಸುವ ಲಾಳಿ ಬಿದಿರಿನದು. ಇದರ ಬೆಲೆ ಕಡಿಮೆ. ಈ ಮಗ್ಗದಲ್ಲಿ ಉಂಡೆಹಾಸನ್ನು ಸ್ವದೇಶೀ ಅಚ್ಚುಗಳೊಂದಿಗೆ ಉಪಯೋಗಿಸಲಾಗುತ್ತದೆ. ಉತ್ತಮ ತರದ ಹತ್ತಿ ನೂಲಿನ ಸೀರೆಗಳನ್ನೂ ಅಂಗ ವಸ್ತ್ರಗಳನ್ನೂ (100ನೇ ನಂಬರ್ ನೂಲಿನ ವರೆಗೆ) ನೇಯಲಾಗುತ್ತದೆ.

ವಾರಾಣಸಿ ಮಗ್ಗ : ಇದು ಅತ್ಯುತ್ತಮ ವಿನ್ಯಾಸಗಳಿಗೆ ಪ್ರಸಿದ್ಧವಾದ ಬ್ರೊಕೇಟ್ ಬಟ್ಟೆಗಳನ್ನು ನೇಯಲು ಹೆಸರಾಂತ ಕೈಲಾಳಿ ಮಗ್ಗ. ಸೂಕ್ಷ್ಮ ವಿನ್ಯಾಸಗಳನ್ನು ನೇಯಲು ಅಡ್ಡಬಲೆ ಉಪಯೋಗಿಸುವುದು ಇದರ ವೈಶಿಷ್ಟ್ಯ.

ಜಮದಾನಿ ಮಗ್ಗ : ಇದರಲ್ಲಿ ಅತ್ಯುತ್ತಮವಾದ ಜಮದಾನಿ ಬಟ್ಟೆಯನ್ನು ನೇಯಲಾಗುತ್ತದೆ. ಪಾರದರ್ಶಕ ವಿನ್ಯಾಸಗಳಿರುವುದು ಈ ಬಟ್ಟೆಯ ವೈಶಿಷ್ಟ್ಯ. ಸಾಮಾನ್ಯವಾಗಿ ಬಟ್ಟೆ ಬೂದು ಬಣ್ಣದ್ದಾಗಿದ್ದು ವಿನ್ಯಾಸಗಳು ಬಿಳಿಹತ್ತಿನೂಲಿನಲ್ಲಾಗಲಿ ಜರಿಯಲ್ಲಾಗಲಿ ಇರುತ್ತದೆ.

ಚಂದೇರಿ ಮಗ್ಗ: ಇದರಲ್ಲಿ ನೇಯಲಾದ ಬಟ್ಟೆಗೆ ಸಾಮಾನ್ಯವಾಗಿ ಶುದ್ಧ ರೇಷ್ಮೆಯ 13-15 ಎರಡು ಪೊಗು ಸುತ್ತಿದ ರಿಂದ 6ರಿಂದ 8 ಎಳೆಗಳಿರುವ ಅಂಚು ಗಳಿರುತ್ತದೆ. ಈ ರೇಷ್ಮೆಗೆ ಪೂನಾ ರೇಷ್ಮೆ ಎಂದೂ ಹೆಸರುಂಟು. 13-15ರ ಬಂಟಿ ಕಚ್ಚಾ ರೇಷ್ಮೆ ಎಳೆಯ ಹಾಸು ಹಾಗೂ 80ರಿಂದ 200 ನಂಬರುಗಳವರೆಗಿನ ಉತ್ತಮ ತರದ ಹತ್ತಿ ನೂಲಿನ ಹೊಕ್ಕು ಇವನ್ನು ಈ ಮಗ್ಗದಲ್ಲಿ ಉಪಯೋಗಿಸಲಾಗುತ್ತದೆ. ಇದರಲ್ಲಿ ತಯರಾಗುವ ಸೀರೆಯ ಅಂಚು ಮತ್ತು ಇತರೆಡೆಗಳಲ್ಲಿ ನಾಜೂಕಾದ ಹಾಗೂ ಸುವರ್ಣ ವಿನ್ಯಾಸಗಳಿರುವುದು ಮುಖ್ಯ ವೈಶಿಷ್ಟ್ಯ. ಮೂರು ಲಾಳಿಗಳ ಸಹಾಯದಿಂದ ಇದನ್ನು ನೇಯಲಾಗುತ್ತದೆ.

ಕಂಜೀವರಮ್ ಮಗ್ಗ: ವಿನ್ಯಾಸಗಳನ್ನು ನೇಯಲಿಕ್ಕಾಗಿ ಅಡಯಿ ಅಥವಾ ನಕ್ಷೆಯನ್ನು ಉಪಯೋಗಿಸುವುದು ಇದರ ವೈಶಿಷ್ಟ್ಯ. ಹೆಸರಾಂತ ಕಂಜೀವರಮ್ ಸೀರೆಗಳು ತಯಾರಾಗುವುದು ಈ ಮಗ್ಗದಲ್ಲಿಯೇ.

ಅಸ್ಸಾಮಿನ ಹೊರತು ಭಾರತದ ಇತರ ಎಲ್ಲ ಭಾಗಗಳಲ್ಲಿ ತುಂಬ ಜನಪ್ರಿಯವಾದ ಮಗ್ಗವೆಂದರೆ ಹಾರುವ ಲಾಳಿಯ ಮಗ್ಗ. ಇದರಲ್ಲಿ ಸಾಮಾನ್ಯ ಕೈಲಾಳಿಯ ಕುಳಿ ಮಗ್ಗಕ್ಕಿಂತ ಮೂರು ನಾಲ್ಕು ಪಾಲು ಅಧಿಕ ಉತ್ಪಾದನೆಯಾಗುವುದೇ ಇದರ ಜನಪ್ರಿಯತೆಗೆ ಮುಖ್ಯ ಕಾರಣ. ಕ್ಲಿಷ್ಟವಾದ ಅಧಿಕ ಉತ್ಪಾದನೆಯಾಗುವುದೇ ಇದರ ಜನಪ್ರಿಯತೆಗೆ ಮುಖ್ಯ ಕಾರಣ. ಕ್ಲಿಷ್ಟವಾದ ಅಧಿಕ ಹೊಕ್ಕಿನ ವಿನ್ಯಾಸಗಳ ನೇಯ್ಗೆಯೊಂದನ್ನು ಬೆಟ್ಟು ಉಳಿದ ಎಲ್ಲ ಅನುಕೂಲತೆಗಳೂ ಇದರಲ್ಲಿವೆ. ನಿಲುಗಡೆಗಳು ಆಧರಿಸಿಕೊಂಡಿರುತ್ತವೆ. ಹಾಸಿನ ದೂಲದ ಮುಂಭಾಗದಲ್ಲಿರುವ ಸರಳು ಹಾಸಿನ ಕ್ರಮಬದ್ಧವಾದ ಚಲನೆಗೆ ಸಹಾಯಕವಾಗುವುದಲ್ಲದೆ ಅದನ್ನು ಬಿಗಿಯಾಗಿರುವಂತೆಯೂ ಮಾಡುತ್ತದೆ, ಓರೆಯಾಗಿರುವ ಆಸನದಲ್ಲಿ ನೇಕಾರ ಟ್ರೆಡಲುಗಳ ಮೇಲೆ ಕೂತು ನೇಯುತ್ತಾನೆ. ಹಾಗೆ ಮಾಡುವುದರಿಂದ ಅಡ್ಡ ಅಣಿ ಸಿದ್ಧಗೊಳಿಸಲು ಆತನಿಗೆ ಅನುಕೂಲವಾಗುತ್ತದೆ. ಇದರಿಂದ ಪ್ರತಿ ಚದರ ಬಟ್ಟೆಯಲ್ಲಿ ಹೆಚ್ಚು ಎಳೆಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಈ ಮಗ್ಗದಲ್ಲಿ ಒತ್ತೊತ್ತಾಗಿರುವ ನೂಲಿನ ಬಟ್ಟೆಗಳನ್ನು ನೇಯಲಾಗುತ್ತದೆ.

ಮೌಮಗ್ಗ: ಇದರಲ್ಲಿ ವಸ್ತ್ರ ಸುತ್ತುವ ಚಲನೆ, ಅಂಚು ಮತ್ತು ಮೈಯ ಸೂಕ್ಷ್ಮ ತರದ ವೈವಿಧ್ಯಮಯ ವಿನ್ಯಾಸ ನೇಯ್ಗೆಗೆ ಪ್ರತ್ಯೇಕ ಎರಡು ಜಕಾರ್ಡುಗಳು ಮುಂತಾದ ಸುಧಾರಿತ ಸಲಕರಣೆಗಳಿವೆ. ಮಗ್ಗದ ಹಿಂಬದಿಯಲ್ಲಿ ಭಾರಗಳಿಂದ ಕೂಡಿದ ರಾಟೆಗಳ ಮೂಲಕ ಉಂಡೆಯ ರೂಪದಲ್ಲಿರುವ ಹಾಸನ್ನೂ ವ್ಯವಸ್ಥೆಗೊಳಿಸಲಾಗುತ್ತದೆ. ಇವೆಲ್ಲ ಸೌಕರ್ಯಗಳಿಂದಾಗಿ ಈ ಮಗ್ಗದಲ್ಲಿ ಇತರ ಯಾವುದೇ ಕೈಮಗ್ಗಕ್ಕಿಂತಲೂ ಉತ್ಪಾದನೆ ಅಧಿಕ.

ಚೌಕಟ್ಟು ಮಗ್ಗ : ಇದರಲ್ಲಿ ವಿನ್ಯಾಸವುಳ್ಳ ವಸ್ತ್ರಗಳನ್ನು ಎರಡಕ್ಕಿಂತಲೂ ಹೆಚ್ಚು ಟ್ರೆಡಲುಗಳ ಸಹಾಯದಿಂದ ಸುಲಭವಾಗಿ ನೇಯಲು ಸಾಧ್ಯವಿದೆ. ಹೆಚ್ಚು ಉದ್ದವಾದ ಬಟ್ಟೆಗಳನ್ನು ಇದರಲ್ಲಿ ನೇಯಲಾಗುತ್ತದೆ. ಈ ಅನುಕೂಲತೆಗಳಿಂದಾಗಿ ಚೌಕಟ್ಟು ಮಗ್ಗಗಳು ತುಂಬ ಬಳಕೆಗೆ ಬಂದಿವೆ.

ಅರ್ಧಸ್ವಯಂಚಾಲಿತ ಮಗ್ಗ: ಈ ಮಗ್ಗದಲ್ಲಿ ಕೆಲವೊಂದು ಬಗೆಯ ಬಟ್ಟೆಗಳನ್ನು ಮಾತ್ರ ನೇಯಲು ಸಾಧ್ಯ. ಇದರಲ್ಲಿ ಯಾಂತ್ರಿಕ ಮಗ್ಗದ ಅರ್ಧದಷ್ಟು ಅಥವಾ ಕೈಮಗ್ಗದ ಮೂರು ನಾಲ್ಕು ಪಾಲಷ್ಟು ಉತ್ಪಾದನೆಯಾಗುತ್ತದೆ. ಆಳಿನ ಸಹಾಯದಿಂದ ಟ್ರೆಡಲ್ ಒತ್ತಿ ಇಲ್ಲವೇ ಸ್ಲೇ ಚಲಿಸಿ ನಡೆಸಲಿಕ್ಕಾಗುವುದು ಇವುಗಳಲ್ಲಿರುವ ಒಂದು ಅನುಕೂಲತೆ. ವಿದ್ಯುತ್ತು ಇಲ್ಲದಿರುವಲ್ಲಿ ಈ ಮಗ್ಗವನ್ನು ಸರಳವಾದ ಬಟ್ಟೆಗಳನ್ನು ನೇಯಲಿಕ್ಕಾಗಿ ಉಪಯೋಗಿಸಬಹುದು. 
(ಕೆ.ಆರ್.ಎಸ್‍ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ